ಕರಾವಳಿಯಲ್ಲಿ ವಿಪರೀತ ತಾಪಮಾನ; ಜನ ಕಂಗಾಲು - ಕುಡಿಯುವ ನೀರಿಗೂ ಬರ!

 



ಉಡುಪಿ/ದ.ಕ: ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ವಿಪರೀತ ತಾಪಮಾನ ಏರಿಕೆಯಾಗುತ್ತಿದ್ದು ಜನ ಕಂಗಲಾಗಿದ್ದಾರೆ. ದಕ್ಷಿಣ ಕನ್ನಡದಲ್ಲಿ ಗರಿಷ್ಠ ತಾಪಮಾನ 39.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಜನ ಮನೆಯಿಂದ ಹೊರ ಬರಲು ಮನಸ್ಸು ಮಾಡುತ್ತಿಲ್ಲ. 


ಈ ಬಾರಿ ಮುಸ್ಲಿಮರ ಪವಿತ್ರ ರಂಝಾನ್ ತಿಂಗಳು ಕಡು ಬೇಸಿಗೆಯಲ್ಲಿ ಬಂದಿದ್ದು ವಿಪರೀತ ತಾಪಮಾನದ ಹೊರತಾಗಿಯೂ ಮುಸ್ಲಿಂ ಬಾಂಧವರು ನಿಷ್ಠೆಯಿಂದ ಉಪವಾಸ ಆಚರಣೆ ಮಾಡುತ್ತಿರುವುದು ಗಮನಾರ್ಹ. ಮುಂಜಾನೆಯಿಂದ ಸೂರ್ಯಸ್ತದವರೆಗೆ ಈ ಸುಡು ಬಿಸಿಲಿನಲ್ಲೂ ಒಂದು ತೊಟ್ಟು ನೀರು ಕುಡಿಯದೆ ಉಪವಾಸ ಆಚರಿಸುತ್ತಿರುವುದು ನಿಜಕ್ಕೂ ಸೋಜಿಗವೆನಿಸಿದೆ.


ಈತನ್ಮಧ್ಯೆ ವಿಪರೀತ ತಾಪಮಾನ ಕಾರಣ ಕರಾವಳಿಯಲ್ಲಿ ಜ‌ನ ಹಲವು ಸಾಂಕ್ರಾಮಿಕ ರೋಗಗಳಿಗೂ ತುತ್ತಾಗುತ್ತಿದ್ದಾರೆ. ಚರ್ಮ ರೋಗ, ಸನ್ ಬರ್ನ್, ಬಿಸಿಯ ತಾಪಕ್ಕೆ ಡಿ ಹೈಡ್ರೇಡ್'ಗೆ ಒಳಗಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಹೆಚ್ಚಿನ ನೀರು ಕುಡಿಯುವ ಅವಶ್ಯಕತೆ ಕುರಿತು ತಜ್ಞರು ಹೇಳುತ್ತಿದ್ದಾರೆ. 


ಉಡುಪಿ ನಗರ ಪ್ರದೇಶದಲ್ಲಿ ನೀರಿನ ಕೊರತೆ ಎದುರಾಗಿದ್ದು ಜನ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನದಿ,ಹಳ್ಳ,ತೊರೆಗಳು ಈಗಾಗಲೇ ಬತ್ತಿ ಹೋಗಿದ್ದು ಮಳೆಗಾಗಿ ಕಾಯುತ್ತಿದೆ. ಕೆಲವು ದಿನಗಳು ಸುರಿದ ತುಂತುರು ಮಳೆಯೂ ಕೂಡ ತಾಪಮಾನ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದ್ದು ಮಳೆ ಬಂದರೆ ಕೆಲವು ದಿನ ಎಡಬಿಡದೆ ಬಂದಾಗ ಮಾತ್ರ ಪ್ರಯೋಜನವಾಗಲಿದೆ ಎಂಬುವುದು ಸ್ಥಳೀಯರ ವಾದ.


ದಕ್ಷಿಣ ಕನ್ನಡ ಡಿಎಚ್‌ಒ ಡಾ.ಕಿಶೋರ್ ಕುಮಾರ್ ಅವರ ಪ್ರಕಾರ, ಹವಾಮಾನ ವೈಪರೀತ್ಯದಿಂದಾಗಿ ಆರೋಗ್ಯದ ಏರುಪೇರು ಉಂಟಾಗುತ್ತಿದೆ. ಶಾಖದ ಅಲೆ ಮತ್ತು ಏರುತ್ತಿರುವ ತಾಪಮಾನವು ನಿರ್ಜಲೀಕರಣ, ಸ್ನಾಯು ಸೆಳೆತ, ವೈರಲ್ ಸೋಂಕುಗಳಿಗೆ ಕಾರಣವಾಗುತ್ತದೆ ಮತ್ತು ಹಿರಿಯ ನಾಗರಿಕರು ಮತ್ತು ಗರ್ಭಿಣಿಯರಿಗೆ ಹೆಚ್ಚಿನ ಕಾಳಜಿಯ ಅಗತ್ಯವಿದೆ. ಪ್ರತಿಯೊಬ್ಬರೂ ಸಾಕಷ್ಟು ನೀರು, ಹಣ್ಣಿನ ರಸಗಳು, ನಿಂಬೆ ಪಾನಕ, ಮಜ್ಜಿಗೆ ಮತ್ತು ಎಳನೀರನ್ನು ಕುಡಿಯಬೇಕು. ಇದು ದೇಹದ ಜೀವಸತ್ವಗಳು ಮತ್ತು ಖನಿಜಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜನರು ಬಿಸಿಲಿನಲ್ಲಿ ತಿರುಗಾಡುವುದನ್ನು ತಪ್ಪಿಸಬೇಕು. ಮೂರ್ಛೆ ಅಟ್ಯಾಕ್ ಅಥವಾ ತೀವ್ರ ದೌರ್ಬಲ್ಯ ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

Comments